ಅನ್ನ ಕಸಿದ ಕೊರೊನಾ
...
ವಿಜಯಕುಮಾರ್ ಎಸ್.ಕೆ
ಬೆಂಗಳೂರು: ಕೋವಿಡ್ –19 ಕೆಲವರನ್ನು ನೇರವಾಗಿ ಕಾಡುತ್ತಿದ್ದರೆ, ಹಲವರನ್ನು ಪರೋಕ್ಷವಾಗಿ ಕಾಡುತ್ತಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಪ್ರತಿದಿನ ದುಡಿಯಲೇಬೇಕಿರುವ ಕೂಲಿ ಕಾರ್ಮಿಕರು, ಹಮಾಲರು, ಬೀದಿಬದಿ ವ್ಯಾಪಾರಿಗಳು, ಬೀಡಿ ಕಟ್ಟುವವರು, ಆ್ಯಪ್ ಆಧಾರಿತ ಆಟೋ, ಟ್ಯಾಕ್ಸಿ ಚಾಲಕರು, ತಳ್ಳುವ ಗಾಡಿಗಳ ವ್ಯಾಪಾರಿಗಳಿಗೆ ಜೀವನವೇ ಕಷ್ಟವಾಗಿದೆ.
‘ಕೂಡಿಟ್ಟಿದ್ದ ಪುಡಿಗಾಸು ಈಗ ಕರಗಿ ಹೋಗಿದೆ, ವ್ಯಾಪಾರ ನಡೆಸದ ನಮಗೆ ಸಾಲ ಕೊಡುವವರೂ ಇಲ್ಲವಾಗಿದ್ದಾರೆ. ವಿದೇಶದಿಂದ ಬಂದ ಕೊರೊನಾ ಸೋಂಕು ಸದ್ಯಕ್ಕೆ ಹಣ ಉಳ್ಳವರಿಗೆ ಕಾಣಿಸಿಕೊಂಡಿದ್ದರೆ, ಅದರ ಪರಿಣಾಮ ನಮ್ಮಂಥ ಬಡವರ ಬದುಕು ಕಸಿದುಕೊಂಡಿದೆ’ ಎಂದು ಕಣ್ಣೀರಿಡುತ್ತಾರೆ ರೇಸ್‌ಕೋರ್ಸ್ ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಅನುರಾಧಾ.
ಟಿಪ್ಸ್ ಆಧಾರಿತ ಜೀವನ ಬೀದಿಗೆ ಬಂತು
ಪಬ್, ಕ್ಲಬ್, ಡ್ಯಾನ್ಸ್ ಬಾರ್‌ಗಳನ್ನು ನಗರದಲ್ಲಿ ಬಂದ್ ಮಾಡಲಾಗಿದೆ. ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವನಕ್ಕೆ ಗ್ರಾಹಕರು ನೀಡುವ ಟಿಪ್ಸ್ ಆಧಾರ.
ಡ್ಯಾನ್ಸ್‌ಬಾರ್‌ಗಳಲ್ಲಿನ ನರ್ತಕಿಯರು, ಅಲ್ಲಿನ ಕಾರ್ಮಿಕರ ಜೀವನ ಈಗ ಅಕ್ಷರಶಃ ಬೀದಿಗೆ ಬಿದ್ದಿದೆ.
‘ಬೆಂಗಳೂರಿನಲ್ಲಿ ನಾನು ಏನು ಕೆಲಸ ಮಾಡುತ್ತಿದ್ದೇನೆ ಎಂಬುದು ತಂದೆ–ತಾಯಿಗೆ ಗೊತ್ತಿಲ್ಲ. ಹೋಟೆಲ್ ಕೆಲಸ ಎಂದಷ್ಟೇ ಹೇಳಿದ್ದೇನೆ. ಡ್ಯಾನ್ಸ್ ಬಾರ್‌ಗಳಲ್ಲಿ ಸಪ್ಲೆಯರ್ ಕೆಲಸ ಮಾಡುವ ನನಗೆ ಮಾಲೀಕರು ಸಂಬಳ ನೀಡಲ್ಲ, ಗ್ರಾಹಕರು ನೀಡುವ ಟಿಪ್ಸ್ ಮಾತ್ರ ನಮ್ಮ ದುಡಿಮೆ’ ಎಂದು ಮಂಡ್ಯ ಜಿಲ್ಲೆಯ ಹಳ್ಳಿಯೊಂದರ ಕಿರಣ್, ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.
‘ಈ ದುಡಿಮೆ ನಂಬಿ ತಂಗಿ ಮದುವೆಗೆ ಸಾಲ ಮಾಡಿದ್ದೆ. 15 ದಿನಗಳಿಂದ ದುಡಿಮೆ ಇಲ್ಲದೆ ಹೊಟ್ಟೆಗೂ ಇಲ್ಲವಾಗಿದೆ. ಊರಿಗೆ ವಾಪಸ್ ಹೋದರೆ ಸಾಲ ಕೊಟ್ಟವರು ಮನೆ ಬಾಗಿಲಿಗೆ ಬರುತ್ತಾರೆ. ಏನು ಮಾಡಬೇಕೋ ತೋಚುತ್ತಿಲ್ಲ. ಬೇರೆ ಕೆಲಸ ಮಾಡೋಣ ಎಂದರೆ ಎಲ್ಲೂ ಕೆಲಸ ಹುಟ್ಟುತ್ತಿಲ್ಲ’ ಎಂದು ನೊಂದುಕೊಡರು.
1.32 ಕೋಟಿ
ರಾಜ್ಯದಲ್ಲಿರುವ ಸಂಘಟಿತ ಕಾರ್ಮಿಕರು
1 ಲಕ್ಷ
ಮಿಲ್, ವೇರ್ ಹೌಸ್ ಮತ್ತು ಗೋಡೌನ್ ಹಮಾಲರು
1.20 ಲಕ್ಷ
ಎಪಿಎಂಸಿ ಮಾರುಕಟ್ಟೆಯಲ್ಲಿನ ಹಮಾಲರು
60,000
ಮಾರುಕಟ್ಟೆಗಳಲ್ಲಿನ ಹಮಾಲರು
5,000
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿನ ಹಮಾಲರು
4.80 ಲಕ್ಷ
ಬೀದಿ ಬದಿ ವ್ಯಾಪಾರಿಗಳು
60 ಲಕ್ಷ
ಕಟ್ಟಡ ಕಾರ್ಮಿಕರು
10 ಲಕ್ಷ
ವಲಸೆ ಕಾರ್ಮಿಕರು(ಹೊರ ರಾಜ್ಯ)
10 ಲಕ್ಷ
ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ವಲಸೆ ಬಂದ ಕಾರ್ಮಿಕರು
5 ಲಕ್ಷ
ಆಟೋ ಮತ್ತು ಟ್ಯಾಕ್ಸಿ ಚಾಲಕರು
ಇಂದು ಸಭೆ
ಅಸಂಘಟಿತ ಕಾರ್ಮಿಕರನ್ನು ಸಂಕಷ್ಟದಿಂದ ಪಾರು ಮಾಡಲು ಏನು ಮಾಡಬಹುದು ಎಂಬುದರ ಕುರಿತು ಚರ್ಚಿಸಲು ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಿಗದಿಯಾಗಿದೆ.
ಕಲ್ಯಾಣ ಸುರಕ್ಷಾ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಕಾರ್ಮಿಕ ಸಂಘಟನೆಗಳು, ಮಾಲೀಕರು, ವಿವಿಧ ಇಲಾಖೆ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಿ ಹಣಕಾಸಿನ ನೆರವು ಕೇಳಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಆಧಿಕಾರಿಗಳು ಹೇಳಿದರು.
ಕೊರೊನಾ ಸೋಂಕಿನ ಕಾರಣದಿಂದ ಬೀದಿಗೆ ಬಿದ್ದಿರುವ ಅಸಂಘಟಿತ ಕಾರ್ಮಿಕರಿಗೆ, ಬಡವರಿಗೆ ಕೇರಳ ಮಾದರಿಯಲ್ಲಿ ಉಚಿತವಾಗಿ ದಿನಸಿ ನೀಡಬೇಕು, ಸಾಲದ ಕಂತು ಕಟ್ಟುವ ಅವಧಿ ಮುಂದೂಡಬೇಕು ಕೆ. ಮಹಾಂತೇಶ
ಸಿಐಟಿಯು ರಾಜ್ಯ ಕಾರ್ಯದರ್ಶಿ